ದಾರಿದ್ರ್ಯ
	ಸಮಾಜದಲ್ಲಿ ಪ್ರಚಲಿತವಾಗಿರುವ ಕನಿಷ್ಠ ಅವಶ್ಯಕವೆನಿಸಿದ ಜೀವನಮಟ್ಟಕ್ಕೆ ಬೇಕಾದ ಸರಕು ಮತ್ತು ಸೇವೆಗಳನ್ನು ಪಡೆಯಲು ಅಸಮರ್ಥವಾಗಿರುವ ಪರಿಸ್ಥಿತಿ. ಒಂದು ದೇಶ ಅಥವಾ ಒಬ್ಬ ವ್ಯಕ್ತಿಯ ಸಂಪತ್ತು ಅಥವಾ ವರಮಾನ ಬಹಳ ಕಡಿಮೆಯಿದ್ದರೆ ಆ ದೇಶ ಅಥವಾ ಆ ವ್ಯಕ್ತಿ ದರಿದ್ರ ಎಂದು ಹೇಳಲಾಗುತ್ತದೆ. ದಾರಿದ್ರ್ಯ ಸಾಪೇಕ್ಷವಾದ್ದು. ಇಂದು ದಾರಿದ್ರ್ಯದ ಸ್ಥಿತಿಯೆಂದು ಹೇಳಬಹುದಾದ್ದನ್ನು ಕೇವಲ ಒಂದು ಶತಮಾನದ ಹಿಂದೆ ನೆಮ್ಮದಿಯ ಸ್ಥಿತಿಯೆಂದು ಹೇಳಬಹುದಾಗಿತ್ತು. ದಾರಿದ್ರ್ಯ ಆಯಾ ಸಮಾಜದಲ್ಲಿ ಚಾಲ್ತಿಯಲ್ಲಿರುವ ಜೀವನ ಮಟ್ಟಕ್ಕೆ ಅನುಗುಣವಾಗಿರುತ್ತದೆ. ಆದಕಾರಣ ದಾರಿದ್ರ್ಯ ಪರಿಸ್ಥಿತಿ ತಕ್ಕ ಮಟ್ಟಿಗೆ ಎಲ್ಲ ರಾಷ್ಟ್ರಗಳಲ್ಲೂ ಕಂಡುಬರುವುದು ಸಹಜ. ಆರ್ಥಿಕ ದೃಷ್ಟಿಯಿಂದ ಮುಂದುವರಿದ ರಾಷ್ಟ್ರಗಳಲ್ಲೂ ದಾರಿದ್ರ್ಯವುಂಟು. ಉದಾಹರಣೆಗೆ, ಪ್ರಪಂಚದ ಅತ್ಯಂತ ಸಂಪದ್ಯುಕ್ತ ರಾಷ್ಟ್ರವೆನಿಸಿದ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ 1960ರ ದಶಕದಲ್ಲಿ ಸುಮಾರು ಶೇ.20ರಷ್ಟು ನಾಗರಿಕರು ಬಡವರೆನಿಸಿದವರಿದ್ದರು.

ವರ್ಗಭೂಯಿಷ್ಠವಾದ ಎಲ್ಲ ದೇಶಗಳಲ್ಲೂ ದಾರಿದ್ರ್ಯ ಸಹಜವಾದರೂ ಒಂದೊಂದು ದೇಶದಲ್ಲೂ ಅದು ಒಂದೊಂದು ಪ್ರಮಾಣದಲ್ಲಿರುತ್ತದೆ. ಆಫ್ರಿಕ ಮತ್ತು ಏಷ್ಯಾ ಖಂಡಗಳಲ್ಲಿ ದಾರಿದ್ರ್ಯ ಲ್ಯಾಟಿನ ಅಮೆರಿಕನ್ ದೇಶಗಳಲ್ಲಿರುವುದಕ್ಕಿಂತ ಹೆಚ್ಚು. ಯುರೋಪ್ ಮತ್ತು ಉತ್ತರ ಅಮೆರಿಕಗಳಲ್ಲಿ ಅದರ ತೀವ್ರತೆ ಕಡಿಮೆ. ಯಾವುದೇ ದೇಶವನ್ನು ತೆಗೆದುಕೊಂಡರೆ ಅಲ್ಲಿಯ ಹಳ್ಳಿಗಳಲ್ಲಿ ಪಟ್ಟಣಿಗರಿಗಿಂತ ಹೆಚ್ಚು ದಾರಿದ್ರ್ಯ ಕಂಡುಬರುತ್ತದೆ. ವಿದ್ಯಾವಂತರಿಗಿಂತ ಅವಿದ್ಯಾವಂತರಲ್ಲಿ, ನೌಕರರಿಗಿಂತ ಕರ್ಮಚಾರಿಗಳಲ್ಲಿ, ಸಣ್ಣ ಕುಟಂಬಗಳಿಗಿಂತ ದೊಡ್ಡವುಗಳಲ್ಲಿ ದಾರಿದ್ರ್ಯ ಸಾಮಾನ್ಯವಾಗಿ ಹೆಚ್ಚು.

ಸಂಪತ್ತು, ಆದಾಯ, ಸೌಕರ್ಯ, ಅಧಿಕಾರಗಳ ಅಸಮಾನತೆಯೂ ಜೀವನಾವಶ್ಯಕ ವಸ್ತುಗಳ ಕೊರತೆಯೂ ಹಿಂದಿನಿಂದಲೂ ಇದ್ದಿರಬಹುದಾದರೂ ದಾರಿದ್ರ್ಯದ ಬಗ್ಗೆ ಸಾಮಾಜಿಕ ಪ್ರಜ್ಞೆ ಬೆಳೆದದ್ದು ಹಾಗೂ ಅದೊಂದು ಸಾಮಾಜಿಕ ಸಮಸ್ಯೆಯೆಂಬ ಅರಿವು ಬಂದದ್ದು ತೀರ ಈಚೆಗೆ. ವಾಣಿಜ್ಯ, ಹಣ ಚಲಾವಣೆ ಮತ್ತು ಅಂತರಾಷ್ಟ್ರೀಯ ಸಂಪರ್ಕಗಳ ಬೆಳವಣಿಗೆಯ ಅನಂತರವೇ ಇಂಥ ಕಲ್ಪನೆಗೆ ಅನುವು ಸಿಕ್ಕಿತು. ಕಾರ್ಮಿಕ ವರ್ಗ, ಕೂಲಿಗಾರರ ಸಂಘಟನೆ, ರಾಜಕೀಯ ಪಕ್ಷ, ಜನತಾ ಚಳುವಳಿ, ಕಲ್ಯಾಣ ಕಾರ್ಯಕ್ರಮ ಮತ್ತು ಸಾರ್ವಜನಿಕ ಸಹಾಯಗಳು ಬೆಳೆಯುವುದರ ಜೊತೆಗೆ ದಾರಿದ್ರ್ಯವನ್ನು ಅಳೆಯುವ ಹಾಗೂ ನಿರ್ಮೂಲಗೊಳಿಸುವ ಪ್ರಯತ್ನಗಳೂ ನಡೆದಿವೆ.

ಮೇಲುನೋಟಕ್ಕೆ ದಾರಿದ್ರ್ಯವೆಂಬುದು ಸರಳವಾದ ಪರಿಕಲ್ಪನೆಯಾದರೂ-ಊಟ, ಉಡಿಗೆ, ವಸತಿ ಸೌಕರ್ಯಗಳು ಇಲ್ಲದ ಒಂದು ಪರಿಸ್ಥಿತಿಯಾದರೂ-ವಿಶ್ಲೇಷಿಸಿ ನೋಡಿದರೆ ಅದೊಂದು ಮಾನಸಿಕ ಸ್ಥಿತಿಯೂ ಹೌದು. ಅದಕ್ಕೊಂದು ನಿಷ್ಕøಷ್ಟವಾದ ಅರ್ಥ ಹಚ್ಚುವುದು ಪ್ರಯಾಸದ ಕೆಲಸವೇ. ಒಂದು ವ್ಯಾಖ್ಯೆಯ ಪ್ರಕಾರ ದಾರಿದ್ರ್ಯವೆಂದರೆ ಸಮಾಜ ಬಯಸುವಂಥ ಶಾರೀರಿಕ ಹಾಗೂ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಂಡು, ತಾನೂ ತನ್ನ ಅವಲಂಬಿಗಳೂ ಸಾರ್ಥಕವಾಗಿ ಬದುಕಿ ದುಡಿಯಲು ಬೇಕಾಗುವ ಜೀವನ ಮಟ್ಟವನ್ನು ಪಡೆಯಲು ಅಸಾಧ್ಯವಾದಂಥ ಪರಿಸ್ಥಿತಿ.

ಯಾವ ವರಮಾನವೂ ಇಲ್ಲದಿರುವ ಅಥವಾ ಹೆಚ್ಚು ವರಮಾನವಿಲ್ಲದ ಹಾಗೂ ಯಾಚನೆ ಮತ್ತು ಪರಾಶ್ರಯದಲ್ಲಿ ಬಾಳುವ ಜನರು ದರಿದ್ರರೆಂಬುದು ನಿರ್ವಿವಾದ. ಅಂತೆಯೇ ಅಮಿತ ಅಧಿಕಾರ ಸಂಪತ್ತುಗಳನ್ನು ಭೋಗಿಸುವವರು ಶ್ರೀಮಂತರೆಂಬುದೂ ನಿರ್ವಿವಾದ. ಆದರೆ ಈ ಎರಡು ವರ್ಗಗಳನ್ನು ಬಿಟ್ಟು ಉಳಿದವರಲ್ಲಿ ದರಿದ್ರರು ಯಾರೆಂಬುದು ಚರ್ಚೆಯ ವಿಷಯ. ಬಡವರ ಕಲ್ಯಾಣ ಕಾರ್ಯಕ್ರಮಗಳನ್ನು ನಿರ್ವಹಿಸುವ ದೃಷ್ಟಿಯಿಂದ ಹಾಗೂ ಸಹಾಯ-ಸವಲತ್ತುಗಳನ್ನು ಯಾರಿಗೆ ಹಂಚಿಕೊಡಬೇಕೆಂದು ನಿರ್ಧರಿಸುವ ದೃಷ್ಟಿಯಿಂದ ಆಡಳಿತಗಾರರು ಹೆಚ್ಚು ವಸ್ತುನಿಷ್ಠವಾದ ಮನದಂಡಗಳನ್ನು ಬಳಸಲು ಯತ್ನಿಸಿದ್ದಾರೆ. ಜನರ ಆಹಾರ, ಆಹಾರದ ಕ್ಯಾಲರಿಗಳ ಪ್ರಮಾಣ, ಜೀವನವೆಚ್ಚದ ಸೂಚ್ಯಂಕ-ಇವು ಮುಖ್ಯ.

	ದಾರಿದ್ರ್ಯ ಸಾಪೇಕ್ಷ ಪರಿಕಲ್ಪನೆಯಾದ್ದರಿಂದ ಅಂತರರಾಷ್ಟ್ರೀಯವಾಗಿ ಅದನ್ನು ಅಳೆಯುವುದು ಸುಲಭವಲ್ಲ. ಆದರೂ ರಾಷ್ಟ್ರಗಳಲ್ಲಿ ಕಂಡುಬರುವ ದಾರಿದ್ರ್ಯದ ಪ್ರಮಾಣವನ್ನು ಸ್ಥೂಲವಾಗಿ ಸೂಚಿಸಲು ಅರ್ಥಶಾಸ್ತ್ರಜ್ಞರು ಎರಡು ಮಾರ್ಗಗಳನ್ನು ಅನುಸರಿಸುವರು. ಒಂದನೆಯದಾಗಿ, ಪ್ರತಿ ದೇಶದಲ್ಲೂ ತಲೆ ಒಂದಕ್ಕೆ ಸಿಗುವಂಥ ಆವಶ್ಯಕ ಸರಕು-ಸೇವೆಗಳು ಎಷ್ಟೆಂಬುದನ್ನು ಕಂಡುಹಿಡಿದು ಅದನ್ನು ಇತರ ದೇಶಗಳೊಂದಿಗೆ ಹೋಲಿಸಿರುವುದು. ದಾರಿದ್ರ್ಯ ಹೆಚ್ಚಾಗಿರುವ ರಾಷ್ಟ್ರಗಳಲ್ಲಿ ಸ್ವಾಭಾವಿಕವಾಗಿಯೇ ಅವಶ್ಯಕ ಸರಕು-ಸೇವೆಗಳ ಪ್ರಮಾಣ ಕಡಿಮೆಯಿರುತ್ತದೆ. ಎರಡನೆಯದಾಗಿ, ಪ್ರತಿ ದೇಶದ ಅನುಭೋಗ ವೆಚ್ಚದಲ್ಲಿ ಆಹಾರಕ್ಕಾಗಿ ವ್ಯಯಿಸುವ ಹಣದ ಪ್ರಮಾಣವನ್ನು ಕಂಡುಹಿಡಿದು ಅದನ್ನು ಇತರ ದೇಶಗಳೊಂದಿಗೆ ಹೋಲಿಸುವುದು. ಒಬ್ಬ ವ್ಯಕ್ತಿಯ ವರಮಾನ ಎಷ್ಟು ಕಡಿಮೆಯೋ, ಆಹಾರದ ಮೇಲೆ ಆತ ಮಾಡುವ ಖರ್ಚಿನ ಪ್ರಮಾಣ ಅಷ್ಟು ಹೆಚ್ಚು- ಎಂಬ ಎಂಗೆಲನ ನಿಯಮ ಇದಕ್ಕೆ ಆಧಾರ (ನೋಡಿ- ಎಂಗೆಲನ-ಸೂತ್ರ). ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ 1963ರ ವರದಿಯ ಪ್ರಕಾರ ಈ ಖರ್ಚಿನ ಪ್ರಮಾಣ ಕೆನಡ ಮತ್ತಿತರ ಶ್ರೀಮಂತ ರಾಷ್ಟ್ರಗಳಲ್ಲಿ 25-30% ಇದ್ದರೆ, ಯೂರೋಪಿನ ಬಡ ರಾಷ್ಟ್ರಗಳಲ್ಲಿ 50-55% ಆಫ್ರಿಕ, ಏಷ್ಯ ಮತ್ತು ಲ್ಯಾಟಿನ್ ಅಮೆರಿಕದ ನಗರ ಪ್ರದೇಶಗಳಲ್ಲಿ 60%ಕ್ಕೂ ಹೆಚ್ಚು; ಅತ್ಯಂತ ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅದು 70-80%. ಇದು ಆಯಾ ರಾಷ್ಟ್ರಗಳ ದಾರಿದ್ರ್ಯವನ್ನು ಪರ್ಯಾಯವಾಗಿ ಸೂಚಿಸುತ್ತದೆ. ಬಡದೇಶಗಳಲ್ಲಿ ಒಟ್ಟು ಅನುಭೋಗ ಖರ್ಚಿನಲ್ಲಿ ಆಹಾರಕ್ಕಾಗಿ ಮಾಡುವ ಖರ್ಚಿನ ಪ್ರಮಾಣ ಹೆಚ್ಚಾಗಿರುತ್ತದೆ.

	ದಾರಿದ್ರ್ಯದ ಪರಿಸ್ಥಿತಿ ಉಂಟಾಗಲು ಕಾರಣವಾಗುವ ಅಂಶಗಳು ಇವೇ ಎಂದು ನಿರ್ದಿಷ್ಟವಾಗಿ ಹೇಳುವುದು ಕಷ್ಟ. ದಾರಿದ್ರ್ಯವನ್ನು ಕಾಲ, ದೇಶ, ವ್ಯಕ್ತಿ ಮತ್ತು ನಗರಗಳ ದೃಷ್ಟಿಕೋನದಿಂದ ನೋಡಿದ್ದೇ ಆದರೆ ಈ ಪರಿಸ್ಥಿತಿಯ ಅಸ್ತಿತ್ವಕ್ಕೆ ಸ್ಥೂಲ ವಿವರಣೆ ಸಿಕ್ಕಂತಾಗುತ್ತದೆ. ಯಾವುದೇ ಆರ್ಥಿಕತೆಯ ಇತಿಹಾಸವನ್ನು ನೋಡಿದಾಗ ಒಂದೊಂದು ಅವಧಿಯಲ್ಲೂ ದಾರಿದ್ರ್ಯ ತಲೆದೋರಿರುವುದು ಕಂಡುಬರುತ್ತದೆ. ಉದಾಹರಣೆಗೆ ಕೈಗಾರಿಕಾ ಪ್ರಧಾನ ಅರ್ಥಿಕತೆಗಳಲ್ಲಿ ನಿಯತಕಾಲಿತವಾಗಿ ಸಂಭವಿಸುವ ಆರ್ಥಿಕ ಚಕ್ರಗಳಿಂದಾಗಿ ಆರ್ಥಿಕ ಚಟುವಟಿಕೆಗಳಲ್ಲಿ ಏರಿಳಿತಗಳುಂಟಾಗುತ್ತದೆ. ಹಾಗೆಯೇ ಭಾರತದಂಥ ಕೃಷಿಪ್ರಧಾನ ಆರ್ಥಿಕತೆಗಳಲ್ಲಿ ಕಾಲಕ್ಕೆ ಸರಿಯಾಗಿ ಮಳೆಯಿಲ್ಲದೆ ಕ್ಷಾಮಗಳುಂಟಾಗಿ ಜನತೆ ಆಗಿಂದಾಗ್ಗೆ ದಾರಿದ್ರ್ಯಕ್ಕೆ ಒಳಗಾಗಿರುವುದುಂಟು. ವ್ಯಕ್ತಿಶಃ ನೋಡಿದರೆ ಸೋಮಾರಿತನ, ಆಲಸ್ಯ ಮೊದಲಾದ ಕಾರಣಗಳಿಂದ ಉತ್ಪಾದನ ಪ್ರಕ್ರಿಯೆಗಳಲ್ಲಿ ಪರಿಣಾಮಕಾರಿಯಾಗಿ ಪಾಲ್ಗೊಳ್ಳದಿರುವುದರಿಂದಲೂ ಜೂಜು, ಕುಡಿತ ಮೊದಲಾದ ದುಶ್ಚಟಗಳಿಗೆ ಒಳಗಾಗಿ ವರಮಾನವನ್ನು ಪೋಲು ಮಾಡುವುದರಿಂದಲೂ ಕೆಲವು ವ್ಯಕ್ತಿಗಳು ದಾರಿದ್ರ್ಯಕ್ಕೆ ಒಳಗಾಗುತ್ತಾರೆ. ನೈಸರ್ಗಿಕ ಸಂಪತ್ತಿನ ಅಭಾವದಿಂದಾಗಿ ಅಥವಾ ಇರುವ ನೈಸರ್ಗಿಕ ಸಂಪತ್ತನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳದಿರುವುದರಿಂದಾಗಿ ಪ್ರಾದೇಶಿಕವಾಗಿ ದಾರಿದ್ರ್ಯ ಉಂಟಾಗುತ್ತದೆ. ಕೊನೆಯದಾಗಿ, ಆರ್ಥಿಕ ಮತ್ತು ಸಾಮಾಜಿಕ ರಚನೆಯ ಕೆಲವು ನ್ಯೂನತೆಗಳಿಂದ ಉತ್ಪಾದನ ಸಾಧನ ಸಂಪತ್ತಿನ ಸ್ವಾಮ್ಯದ ಬಗ್ಗೆ ಅಸಮಾನತೆ ಉಂಟಾಗಿ ಕೆಲವು ವರ್ಗಗಳು ಸತತವಾಗಿ ದಾರಿದ್ರ್ಯಕ್ಕೆ ತುತ್ತಾಗಿರುವುದುಂಟು.

	ದಾರಿದ್ರ ಯಾವುದೇ ಕಾರಣದಿಂದ ಉಂಟಾದರೂ ಅದರ ಪರಿಣಾಮ ಒಂದೇ. ಪುಷ್ಟಿಕರವಾದ ಆಹಾರ ಸೇವನೆಗೆ ಅವಕಾಶವಿಲ್ಲದಂತಾಗುವುದರಿಂದ ಜನರು ರೋಗರುಜಿನಗಳಿಗೆ ತುತ್ತಾಗುವರು. ಔಷಧೋಪಚಾರಕ್ಕೆ ಅನುಕೂಲವಿಲ್ಲದ ಕಾರಣ ದರಿದ್ರರಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿರುತ್ತದೆ. ಕಡಿಮೆ ವರಮಾನದಿಂದ ವಿದ್ಯಾರ್ಜನೆ ಮತ್ತು ಕುಶಲತೆಯ ಸಂಪಾದನೆಗೆ ಅಡ್ಡಿಯುಂಟಾಗಿ ವ್ಯಕ್ತಿಯ ಉತ್ಪಾದನ ಸಾಮಥ್ರ್ಯ ಕುಂಠಿತವಾಗುತ್ತದೆ. ಅಲ್ಲದೆ ಕಳ್ಳತನ, ಜಗಳ, ಮುಂತಾದ ಸಾಮಾಜಿಕ ಪಿಡುಗುಗಳಿಗೆ ದಾರಿದ್ರ ಎಡೆಮಾಡಿಕೊಡುತ್ತದೆ.

	ಬಡವರ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವ ಪ್ರಯತ್ನವನ್ನು ಮೊದಲಿಗೆ ಸಮಾಜ ಸುಧಾರಕರು ಕೈಗೊಂಡರು. ಅನಂತರ ಕಾರ್ಮಿಕ ವರ್ಗವೇ ಮೊದಲಾದ ಆರ್ಥಿಕ ಮತ್ತು ಸಾಮಾಜಿಕ ವರ್ಗಗಳು ಸಂಘಟನೆಗೊಂಡು ಸಂಘಗಳನ್ನು ಸ್ಥಾಪಿಸಿಕೊಂಡು ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳುವ ಪ್ರಯತ್ನ ಕೈಗೊಂಡವು. ಅಲ್ಲದೆ ಕಾಲಕ್ರಮದಲ್ಲಿ ಸಾಮಾನ್ಯ ಜನತೆಯನ್ನು ಉದ್ಧಾರ ಮಾಡುವ ದೃಷ್ಟಿಯಿಂದ ರೂಪುಗೊಂಡ ಚಳವಳಿಗಳ ಮೂಲಕ ಸಮಾಜವಾದದ ಪರಿಕಲ್ಪನೆ ಬೆಳೆಯಿತಲ್ಲದೆ ಈ ವಾದವನ್ನು ಎತ್ತಿ ಹಿಡಿದು ಅನುಷ್ಠಾನಕ್ಕೆ ತರುವ ಉದ್ದೇಶ ಹೊಂದಿದ ರಾಜಕೀಯ ಪಕ್ಷಗಳೂ ಹುಟ್ಟಿಕೊಂಡುವು. ಇವಕ್ಕೆ ಸರ್ಕಾರವನ್ನು ಸ್ಥಾಪಿಸಿವು ಅವಕಾಶ ಸಿಕ್ಕಾಗ ಇವು ದಾರಿದ್ರ್ಯವನ್ನು ನಿರ್ಮೂಲ ಮಾಡುವ ಸಲುವಾಗಿ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡುವು. ಆಧುನಿಕ ಸರ್ಕಾರಗಳು ತಮ್ಮ ಪ್ರಜೆಗಳ ಕ್ಷೇಮಸಾಧನೆ ಮಾಡುವ ಕಾರ್ಯದಲ್ಲಿ ನಿರತವಾಗಿದ್ದು ಕಲ್ಯಾಣ ರಾಜ್ಯ ಸ್ಥಾಪನೆಯ ಗುರಿ ಹೊಂದಿದೆ. ಕಲ್ಯಾಣ ರಾಜ್ಯಗಳ ಗುರಿಗಳಲ್ಲಿ ಮುಖ್ಯವಾದ್ದು ದಾರಿದ್ರ್ಯ ನಿವಾರಣೆ.

	ಭಾರತದಲ್ಲಿ ದಾರಿದ್ರ್ಯ : ಭಾರತದಲ್ಲಿ ದಾರಿದ್ರ್ಯ ಸಮಸ್ಯೆಯನ್ನು ಕುರಿತು ಕ್ರಮಬದ್ಧವಾಗಿ ಚಿಂತನೆ ಮಾಡಿದವರಲ್ಲಿ ಮೊಟ್ಟಮೊದಲಿಗರು ದಾದಾಭಾಯಿನವರೋಜಿ. ಅವರು 1870ರಲ್ಲಿ ಬರೆದ ಲೇಖನದಲ್ಲಿ ಭಾರತದ ವಾರ್ಷಿಕ ತಲಾ ವರಮಾನ ಕೇವಲ ರೂ. 20 ಎಂದು ತೋರಿಸಿ, ಇಲ್ಲಿಯ ದಾರಿದ್ರ್ಯದ ಮಟ್ಟವೆಷ್ಟೆಂಬುದನ್ನು ಸೂಚಿಸಿದರು. ಅನಂತರ ಇವರು ಬರೆದ ಗ್ರಂಥಗಳೆಲ್ಲವೂ ಬಹುಮಟ್ಟಿಗೆ ಭಾರತದ ದಾರಿದ್ರ್ಯದ ಮಟ್ಟವನ್ನು ಹಾಗೂ ಅದಕ್ಕೆ ಕಾರಣಗಳನ್ನು ಕುರಿತಂಥವು. ಬ್ರಿಟಿಷರು ಭಾರತದ ಸಂಪತ್ತನ್ನು ಸೂರೆ ಮಾಡಿದ ಕಾರಣ ಭಾರತದಲ್ಲಿ ದಾರಿದ್ರ್ಯ  ಉದ್ಭವಿಸಿತೆಂಬುದು ಅವರ ಅಭಿಪ್ರಾಯ. ಅವರ ಅನಂತರ ಕೈಗೊಳ್ಳಲಾದ ಅಧ್ಯಯನಗಳೆಲ್ಲವೂ ಇದೇ ನಿಟ್ಟಿನಲ್ಲಿ ಮುಂದುರಿದವು.

	ದಾರಿದ್ರ್ಯ ರೇಖೆ : 19ನೆಯ ಶತಮಾನದ ಕೊನೆಗೆ ದರಿದ್ರರು ಯಾರೆಂಬುದನ್ನು ನಿರ್ಧರಿಸಲು ಅನೇಕರು ಸರ್ವೆಕ್ಷಣೆಗಳನ್ನು ಕೈಗೊಂಡು, ಜೀವನಾವಶ್ಯಕತೆಗಳನ್ನು ಪೂರೈಸಿಕೊಳ್ಳಲಾಗಾದ ಹಾಗೂ ಶರೀರ ಸ್ವಾಸ್ಥ್ಯ ಮತ್ತು ಸಾಮಥ್ರ್ಯವನ್ನು ಕಾಪಾಡಲು ಅಸಮರ್ಥರಾದ ಜನರನ್ನು ಈ ಗುಂಪಿಗೆ ಸೇರಿಸಿದರು. ಕನಿಷ್ಠ ಜೀವನಾವಶ್ಯಕತೆಯ ಮಟ್ಟವನ್ನು ದಾರಿದ್ರ್ಯ ರೇಖೆ ಎಂದು ಕರೆಯಲಾಗಿದೆ. ಇಂಗ್ಲೆಂಡಿನಲ್ಲಿ 8-10% ಜನರೂ (ಟೌನ್‍ಸೆಂಡ್ ಪ್ರಕಾರ) ಅಮೆರಿಕದಲ್ಲಿ 20% ಜನರೂ (ಮಾರ್ಗನ್ ಪ್ರಕಾರ) ದಾರಿದ್ರ ರೇಖೆಗಿಂತ ಕೆಳಗಿದ್ದಾರೆ ಎಂದರೆ ಇವರು ಕಡುಬಡವರು. ಇವರಲ್ಲಿ ವೃದ್ಧರು, ಪಿತೃಹೀನ ಕುಟುಂಬಗಳು ನಿರುದ್ಯೋಗಿಗಳು, ವ್ಯಾಧಿಪೀಡಿತರು, ಪಿಂಚಣಿದಾರರು ಸೇರಿದ್ದಾರೆ. ನವರೋಜಿಯವರು ಭಾರತದ ಸರಾಸರಿ ತಲಾ ವರಮಾನವನ್ನು ಇಂಗ್ಲೆಂಡಿನದಕ್ಕೆ ಹೋಲಿಸಿ ಇಲ್ಲಿಯ ದಾರಿದ್ರವೆಷ್ಟು ಎಂಬುದನ್ನು ಬಹಳ ಅಸ್ಥೂಲವಾಗಿ ತೋರಿಸಿಕೊಟ್ಟರು. ಆದರೆ ದಾರಿದ್ರ ನಿರ್ಮೂಲನೆಯ ಧೋರಣೆಗಳನ್ನು ರೂಪಿಸಬೇಕಾದಲ್ಲಿ ಮೊದಲು ಕನಿಷ್ಠ ಆವಶ್ಯಕತೆಗಳನ್ನು ತೃಪ್ತಿಪಡಿಸಬಲ್ಲ ಆದಾಯವೆಷ್ಟೆಂಬುದನ್ನು ನಿರ್ಧರಿಸಿ, ಈ ಕನಿಷ್ಠ ಮಟ್ಟ ಅಥವಾ ರೇಖೆಗಿಂತ ಕೆಳಗೆ ಇರುವ ಜನರ ಸಂಖ್ಯೆ ಎಷ್ಟೆಂಬುದನ್ನು ನಿರ್ಧರಿಸಿಕೊಳ್ಳಬೇಕು. ಈ ಕನಿಷ್ಠ ಮಟ್ಟವನ್ನು ಸೂಚಿಸುವ ರೇಖೆಯೇ ದಾರಿದ್ರ್ಯ ರೇಖೆ. ದಾರಿದ್ರ್ಯ ರೇಖೆಯನ್ನು ನಿರ್ಧರಿಸಲು ಪ್ರಯತ್ನಿಸಿದ ಅನೇಕ ತಜ್ಞರು 1962ರಲ್ಲಿ ಭಾರತ ಸರ್ಕಾರದಿಂದ ನಿಗದಿಯಾದ ಕನಿಷ್ಠ ಜೀವನಮಟ್ಟವನ್ನು ಏರ್ಪಡಿಸಿದ ಅಧ್ಯಯನದ ಪ್ರಕಾರ ನಿರ್ಣಯಿಸಲಾದ ಕನಿಷ್ಠ ಜೀವನಮಟ್ಟದ ಖರ್ಚಿನ ಅಂದಾಜನ್ನು ಆಧಾರವಾಗಿಟ್ಟುಕೊಂಡರು. ಈ ಅಧ್ಯಯನದ ಪ್ರಕಾರ ಕನಿಷ್ಠ ಜೀವನಮಟ್ಟದ ಖರ್ಚು ವಿದ್ಯಾರ್ಜನೆ ಮತ್ತು ಔಷಧೋಪಚಾರ ಖರ್ಚುಗಳನ್ನುಳಿದು ವರ್ಷಕ್ಕೆ ತಲಾ ರೂ. 240 (1960-61ರ ಬೆಲೆಗಳಲ್ಲಿ). ಮಿನ್ಹಾಸ್ ಅವರು 1960-61ರಲ್ಲಿ ಶೇ. 59.4ರಷ್ಟು ಜನಸಂಖ್ಯೆ ಭಾರತದಲ್ಲಿ ದಾರಿದ್ರ್ಯ ರೇಖೆಯಿಂದ ಕೆಳಗೆ ಇದೆಯೆಂದು ಅಂದಾಜು ಮಾಡಿದರು. ದಾಂಡೇಕರ್ ಮತ್ತು ರಥ್ ಅವರು ದಾರಿದ್ರ್ಯ ರೇಖೆಯನ್ನು ಅಳೆಯಲು ಗ್ರಾಮಾಂತರ ಮತ್ತು ಪಟ್ಟಣ ಪ್ರದೇಶಗಳಿಗೆ ಬೇರೆ ಬೇರೆ ಅನುಭೋಗ ಮಾದರಿಗಳನ್ನಿಟ್ಟುಕೊಂಡರು. 1960-61ರ ಬೆಲೆಗಳ ಮಟ್ಟದಲ್ಲಿ ವಾರ್ಷಿಕ ಕನಿಷ್ಠ ಅನುಭೋಗಿ ಖರ್ಚು ಹಳ್ಳಿಗಳಲ್ಲಿ ರೂ. 170 ಎಂದೂ ಪಟ್ಟಣಗಳಲ್ಲಿ ರೂ. 271 ಎಂದೂ ಭಾವಿಸಿ ಈ ಅಂಕಿಗಳ ಆಧಾರದ ಮೇಲೆ ಹಳ್ಳಿ ಮತ್ತು ಪಟ್ಟಣವಾಸಿಗಳಲ್ಲಿ ದಾರಿದ್ರ್ಯರ ಪ್ರಮಾಣ ಅನುಕ್ರಮವಾಗಿ ಶೇ. 33 ಮತ್ತು ಶೇ. 40 ಎಂದು ಇವರು ಅಂದಾಜು ಮಾಡಿದರು. 1968-1969ರ ಬೆಲೆಗಳಲ್ಲಿ ಈ ಎರಡು ವರ್ಗಗಳ ವಾರ್ಷಿಕ ಕನಿಷ್ಠ ಅನುಭೋಗ ಖರ್ಚು ಅನುಕ್ರಮವಾಗಿ ರೂ. 324 ಮತ್ತು ರೂ. 486 ಎಂಬುದು ಅವರ ನಿರ್ಣಯ. ಈ ಅಂಕಿಗಳ ಆಧಾರದ ಮೇಲೆ 1968-1969ರಲ್ಲಿ ಶೇ. 40 ಪಟ್ಟಣಿಗರೂ ದಾರಿದ್ರ್ಯ ರೇಖೆಗಿಂತ ಕೆಳಗೆ ಜೀವನ ನಡೆಸುತ್ತಿದ್ದಾರೆಂಬುದು ಇವರ ಅಭಿಪ್ರಾಯ. ದಾಂಡೇಕರ್ ಮತ್ತು ರಥ್ ಅವರ ಅಧ್ಯಯನದ ಪ್ರಕಾರ 1960-61 ಮತ್ತು 1968-69ರ ಅವಧಿಯಲ್ಲಿ ದರಿದ್ರರ ಸಂಖ್ಯೆ ಹಳ್ಳಿಗಳಲ್ಲಿ ಶೇ. 33ರಿಂದ ಶೇ. 40ಕ್ಕೂ ಪಟ್ಟಣಗಳಲ್ಲಿ ಶೇ. 49ರಿಂದ ಶೇ. 50ಕ್ಕೂ ಏರಿತು. ಇವರಲ್ಲಿ ಹೆಚ್ಚಿನವರು ತಮ್ಮ ಆದಾಯದ 80-85%ರಷ್ಟನ್ನು ಆಹಾರ ಮತ್ತು ಸೌದೆಗಾಗಿಯೇ ಖರ್ಚು ಮಾಡಬೇಕಾಗುತ್ತದೆ. ರಾಬರ್ಟ್ ಮೆಕ್‍ನಮಾರಾ ತಮ್ಮ ಒಂದು ಗ್ರಂಥದಲ್ಲಿ (1973) ಹೇಳಿದಂತೆ ಬಡತನ ಸರ್ವವ್ಯಾಪಿಯಾಗಿದೆ, ತೀವ್ರಗೊಳ್ಳುತ್ತದೆ ಮತ್ತು ಜಾಗತಿಕ ಶಾಂತಿಗೆ ಗಂಡಾಂತರ ಒಡ್ಡುತ್ತಿದೆ.

	ದಾರಿದ್ರ್ಯನಿವಾರಣೆ : ದಾರಿದ್ರ್ಯಕ್ಕೆ ಅನೇಕ ಕಾರಣಗಳಿವೆ ದೇಹ ದೌರ್ಬಲ್ಯ, ಆನುವಂಶಿಕ ನ್ಯೂನತೆಗಳು, ರೋಗಗಳು ಮುಂತಾದವು ವೈಯಕ್ತಿಕ ಕಾರಣಗಳಾದರೆ ನಿಸರ್ಗ ಸಂಪತ್ತಿನ ಅಭಾವ, ಪ್ರತಿಕೂಲ ಮಾನ್ಸೂನು, ನೆಲದ ಸವಕಳಿ, ಕೀಟಗಳ ಹಾವಳಿ, ಪ್ರಕೃತಿ ಪ್ರಕೋಪಗಳು ಮುಂತಾದವು ಭೌತಿಕ ಕಾರಣಗಳು. ಗೃಹ ಕೈಗಾರಿಕೆಗಳ ಅವನತಿ, ಭೂಛಿದ್ರೀಕರಣ, ಗೈರುಹಾಜರಿಯ ಭೂಮಾಲೀಕತೆ ಇತ್ಯಾದಿ ಆರ್ಥಿಕ ಕಾರಣಗಳೂ ಜಾತೀಯತೆ ಮತ್ತು ಕುಟುಂಬ ವ್ಯವಸ್ಥೆಯಲ್ಲಿನ ಅವಗುಣಗಳು, ಅಸಮರ್ಪಕವಾದ ಶಿಕ್ಷಣ ವ್ಯವಸ್ಥೆ ಮುಂತಾದ ಸಾಮಾಜಿಕ ಕಾರಣಗಳೂ ಇವೆ. ಗುನ್ನಾರ್ ಮಿರ್ಡಾಲ್ ಈ ಕಾರಣಗಳನ್ನು ವಿಶ್ಲೇಷಿಸುತ್ತ, ಜನಾಂಗ ಲಕ್ಷಣವೆನ್ನುವ ಆಲಸ್ಯ ಮುಂತಾದವು ಸುಳ್ಳೆಂದೂ ವಾಯುಗುಣ, ಸಾಂಪ್ರದಾಯಿಕ ಸಂಸ್ಥೆಗಳು ಮತ್ತು ಮನೋವೃತ್ತಿ, ವಿಸ್ತøತವಾದ ಭ್ರಷ್ಟಾಚಾರ, ಏರುತ್ತಿರುವ ಜನಸಂಖ್ಯೆ ಇವೇ ದಾರಿದ್ರ್ಯಕ್ಕೆ ಮುಖ್ಯ ಕಾರಣಗಳೆಂದೂ ಅಭಿಪ್ರಾಯಪಟ್ಟಿದ್ದಾರೆ. ವ್ಯಕ್ತಿದೋಷಗಳಿಗಿಂತ ಸಾಮಾಜಿಕ ಅಸಮಾನತೆಗಳೇ ದಾರಿದ್ರ್ಯದ ಕಾರಣವೆಂಬ ಅಭಿಪ್ರಾಯ ಬಲಗೊಳ್ಳುತ್ತಿದೆ.

	ಕಾಲಕಾಲಕ್ಕೆ ದಾರಿದ್ರ್ಯ ನಿರ್ಮೂಲನೆಯ ಪ್ರಯತ್ನಗಳಾಗಿವೆ. ಅದೀಗ ಸರಕಾರಗಳ ಮಹತ್ತ್ವದ ಧೋರಣೆಯೂ ಹೌದು. ಹಿಂದೆ ವ್ಯಕ್ತಿಯ ಪುನರ್ವಸತಿ, ಪರಿಹಾರ ಮುಂತಾದ ವಿಷಯಗಳ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದರೆ ಇಂದು ಅಸಮಾನತೆಯನ್ನು ತಗ್ಗಿಸಲು ಹೆಚ್ಚು ಗಮನ ಕೊಡಲಾಗುತ್ತಿದೆ. ಕುಟುಂಬ ಭತ್ಯ, ವೃದ್ಧಾಪ್ಯ ಪಿಂಚಣಿ, ಊನಶಕ್ತರ ಪಿಂಚಣಿ, ಸಮುದಾಯ ಸೌಕರ್ಯ ಇತ್ಯಾದಿ ಸಾಮಾಜಿಕ ಭದ್ರತೆಯ ಉಪಾಯಗಳನ್ನು ಒದಗಿಸುವುದೂ ನೌಕರರಿಗೆ ಶಾಸನ ರೀತ್ಯ ಹೆಚ್ಚಿನ ಸವಲತ್ತು ನೀಡುವುದೂ ಭಾಗ್ಯವಂತರ ಆಸ್ತಿ, ವರಮಾನ, ಸೌಕರ್ಯ, ವೇತನ, ಅಧಿಕಾರಿಗಳಿಗೆ ಮಿತಿಯನ್ನು ವಿಧಿಸುವುದೂ ಅನೇಕ ಆಧುನಿಕ ಸರಕಾರಗಳ ಧೋರಣೆಯಾಗಿದೆ. ಭಾರತದಲ್ಲಿ ದಾರಿದ್ರ್ಯ ನಿವಾರಣೆ ಇತ್ತೀಚೆಗೆ ರಾಷ್ಟ್ರೀಯ ಘೋಷಣೆಯಾಗಿ ಪರಿಣಮಿಸಿದೆ. ಐದನೆಯ ಪಂಚವಾರ್ಷಿಕ ಯೋಜನೆಯೆ ಅತ್ಯಂತ ಮುಖ್ಯವಾದ ಧ್ಯೇಯಗಳಲ್ಲಿ ದಾರಿದ್ರ್ಯ ನಿರ್ಮೂಲನವೂ ಒಂದು. ಸಾಮಾನ್ಯವಾಗಿ ದಾರಿದ್ರ್ಯ ನಿವಾರಣೆಗೆ ಎರಡು ಮಾರ್ಗಗಳನ್ನು ಸೂಚಿಸಲಾಗಿದೆ. ಒಂದನೆಯದು ತೀವ್ರಗತಿಯ ಸಮಗ್ರ ಆರ್ಥಿಕ ಅಭಿವೃದ್ಧಿಯಿಂದ ಬಡವರ ಜೀವನಮಟ್ಟ ಏರುತ್ತದೆ ಎಂಬ ಭಾವನೆಯ ಆಧಾರದ ಮೇಲೆ ಆರ್ಥಿಕ ಅಭಿವೃದ್ಧಿಯನ್ನು ತೀವ್ರಗೊಳಿಸಬೇಕಾದರೆ ವಿರಳವಾದ ಸಾಧನ ಸಂಪತ್ತನ್ನು ಗರಿಷ್ಠ ಲಾಭದಾಯಕ ಹಾಗೂ ಉತ್ಪತ್ತಿಕಾರಕ ಆರ್ಥಿಕ ಚಟುವಟಿಕೆಗಳಿಗಾಗಿ ವಿನಿಯೋಗಿಸಬೇಕೆಂಬುದು ಈ ಮಾರ್ಗವನ್ನು ಸಮರ್ಥಿಸುವವರ ಅಭಿಪ್ರಾಯ. ಅವರ ಪ್ರಕಾರ ಯಾವುದೇ ಆರ್ಥಿಕ ಚಟುವಟಿಕೆ ಲಾಭದಾಯಕವೆನಿಸಬೇಕಾದರೆ ಅದರಿಂದ ವಿನಿಯೋಜನೆಯ ಹೆಚ್ಚಳ ಉಂಟಾಗಬೇಕು. ಈ ಮಾರ್ಗವನ್ನು ಸಮರ್ಥಿಸುವವರು ಸಮಗ್ರ ಆರ್ಥಿಕ ಅಭಿವೃದ್ಧಿಯಿಂದ ಎಲ್ಲ ವರ್ಗಗಳಿಗೂ ಉದ್ಯೋಗಾವಕಾಶಗಳು ಉಂಟಾಗಿ ಅಭಿವೃದ್ಧಿಯ ಪ್ರಯೋಜನ ಎಲ್ಲರಿಗೂ ಸಿಗುವಂತಾಗುವುದೆಂದು ನಂಬುತ್ತಾರೆ. ಆದರೆ ವಾಸ್ತವವಾಗಿ ಅಭಿವೃದ್ಧಿ ತೀವ್ರಗೊಂಡರೂ ನಿರುದ್ಯೋಗ ಮುಂದುವರಿಯುವುದುಂಟು. ಅಭಿವೃದ್ಧಿಯ ಪ್ರಯೋಜನ ಎಲ್ಲ ವರ್ಗಗಳಗೂ ಲಭಿಸುವುದುಂಟು. ಭಾರತದಲ್ಲಿ ಯೋಜನೆಗಳ ಮೊದಲ ಎರಡು ದಶಕಗಳ ಅನುಭವ ಹೆಚ್ಚುಕಡಿಮೆ ಇಂಥದೇ ಆಗಿತ್ತು. ಆರ್ಥಿಕ ಅಭಿವೃದ್ಧಿಯ ಪ್ರಯೋಜನ ಕೆಲವು ಪಂಗಡಗಳಿಗೆ ಹಾಗೂ ಪ್ರದೇಶಗಳಿಗೆ ಲಭ್ಯವಾಗಲಿಲ್ಲ. ನಾಲ್ಕನೆಯ ಯೋಜನೆಯ ಹೊತ್ತಿಗೆ ವಿತರಣೆಯ ವ್ಯವಸ್ಥೆಯನ್ನು ಅಧಿಕೃತ ಕಾರ್ಯಕ್ರಮಗಳ ಮೂಲಕ ಬದಲಾಯಿಸಿದ ಹೊರತು ದಾರಿದ್ರ್ಯ ನಿರ್ಮೂಲವಾಗಲಾರದೆಂದು ಮನಗಾಣಲಾಯಿತು. ಐದನೆಯ ಯೋಜನೆಯಲ್ಲಿ ದಾರಿದ್ರ್ಯ ನಿರ್ಮೂಲನ ಒಂದು ಮುಖ್ಯ ಗುರಿಯಾಗಿದೆಯಲ್ಲದೆ ಈ ಬಗ್ಗೆ ಒಂದು ಹೊಸ ಹಾಗೂ ಸಮರ್ಪಕ ಮಾರ್ಗವನ್ನು ರೂಪಿಸಲಾಗಿದೆ.

	ಐದನೆಯ ಯೋಜನೆಯ ವರದಿಯ ಪ್ರಕಾರ ಭಾರತದಲ್ಲಿ ದಾರಿದ್ರ್ಯಕ್ಕೆ ಕಾರಣ ಆರ್ಥಿಕ ಅಭಿವೃದ್ಧಿ ತಕ್ಕ ದರದಲ್ಲಿ ಆಗದಿರುವುದು ಹಾಗೂ ಆರ್ಥಿಕತೆಯ ಅಸಮಾನತೆ ದಾರಿದ್ರ್ಯವನ್ನು ನಿರ್ಮೂಲ ಮಾಡಬೇಕಾದರೆ ಆರ್ಥಿಕ ಅಭಿವೃದ್ಧಿಯನ್ನು ತೀವ್ರಗೊಳಿಸುವುದೇ ಅಲ್ಲದೆ ಆರ್ಥಿಕ ಅಸಮಾನತೆಯನ್ನೂ ಹೋಗಲಾಡಿಸಬೇಕು. ಇವೆರಡರಲ್ಲಿ ಯಾವುದಾದರೂ ಒಂದು ಕ್ರಮವನ್ನು ಮಾತ್ರ ಕೈಗೊಳ್ಳುವುದರಿಂದ ದಾರಿದ್ರ್ಯ ಸಮಸ್ಯೆಯನ್ನು ಬಿಡಿಸಲು ಸಾಧ್ಯವಿಲ್ಲ. ಆದ ಕಾರಣ ಐದನೆಯ ಯೋಜನೆ ಹಿಂದಿನಕ್ಕಿಂತ ಅಧಿಕ ದರದಲ್ಲಿ ಅಭಿವೃದ್ಧಿಯನ್ನು ಪ್ರವರ್ತನಗೊಳಿಸುವುದರ ಜೊತೆಗೆ ಆರ್ಥಿಕ ಅಸಮಾನತೆಯನ್ನು ತೊಡೆದು ಹಾಕುವ ಅನೇಕ ಕಾರ್ಯಕ್ರಮಗಳನ್ನು ಸೂಚಿಸಿದೆ. ಆರ್ಥಿಕ ಅಭಿವೃದ್ಧಿಯನ್ನು ತೀವ್ರಗೊಳಿಸುವುದು ಮುಖ್ಯ ಧ್ಯೇಯವಾಗಿದ್ದರೂ ಹಳ್ಳಿ ಮತ್ತು ಪಟ್ಟಣವಾಸಿ ಬಡವರಿಗೆ ಪ್ರಯೋಜನ ನೀಡುವಂಥ ಅಭಿವೃದ್ಧಿಗೆ ಪ್ರಾಮುಖ್ಯ ನೀಡಲಾಗಿದೆ. ಯೋಜನಾ ಕಾರ್ಯಕ್ರಮದಲ್ಲಿ ಆಹಾರ ಧಾನ್ಯ ಮತ್ತಿತರ ಸಾಮಾನ್ಯ ಜನರ ಅನುಭೋಗಕ್ಕೆ ಬೇಕಾದ ಸರಕುಗಳ ಉತ್ಪಾದನೆಗೆ ಪ್ರಮುಖ್ಯ ನೀಡಲಾಗಿದೆ. ಅಲ್ಲದೆ ಬಡವರಿಗೆ ಪ್ರಯೋಜನ ನೀಡುವಂಥ ಅಭಿವೃದ್ಧಿಗೆ ಪ್ರಾಮುಖ್ಯ ನೀಡಲಾಗಿದೆ. ಅಲ್ಲದೆ ಬಡವರಿಗೆ ಪ್ರಯೋಜನವಾಗುವಂಥ ಕೆಲವು ನಿರ್ದಿಷ್ಟ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಉದಾಹರಣೆಗೆ, ಸಣ್ಣ ರೈತರಿಗೆ ಸಾಲ ಹಾಗೂ ಇತರ ಸೌಲಭ್ಯಗಳನ್ನು ನೀಡುವ ದೃಷ್ಟಿಯಿಂದ ಸಣ್ಣ ರೈತರ ಅಭಿವೃದ್ಧಿ ಕಾರ್ಯ ಯೋಜನೆಯನ್ನು ಸ್ಥಾಪಿಸಲಾಗಿದೆ. ಅತ್ಯಂತ ಸಣ್ಣ ರೈತರು ಹಾಗೂ ಭೂಹೀನ ಕೃಷಿ ಕರ್ಮಿಕರಿಗಾಗಿ ಸಾಲಸೌಲಭ್ಯಗಳನ್ನು ನೀಡಲಾಗಿರುವುದಲ್ಲದೆ ಅವರು ಜಾನುವಾರು, ಕೋಳಿ ಮುಂತಾದವನ್ನು ಸಾಕುವಂತೆ ಉತ್ತೇಜಿಸಿ ಅವರ ವರಮಾನ ಮಟ್ಟ ಹೆಚ್ಚುವಂತೆ ಮಾಡುವ ಯೋಜನೆಯನ್ನೂ ರೂಪಿಸಲಾಗಿದೆ. ಹಾಗೆಯೇ ನೀರಾವರಿ ಸೌಲಭ್ಯವಿಲ್ಲದ ಜಮೀನನ್ನು ಅಭಿವೃದ್ಧಿಪಡಿಸುವ ಹಾಗೂ ಸಕಾಲಕ್ಕೆ ಮಳೆ ಬೀಳದ ಗ್ರಾಮ ಪ್ರದೇಶಗಳಲ್ಲಿ ಅನ್ಯೋದ್ಯೋಗಗಳನ್ನು ಕಲ್ಪಿಸುವ ಯೋಜನಗೆಳನ್ನು ಕೈಗೊಳ್ಳಲಾಗಿದೆ. 

	ವಿತರಣ ವ್ಯವಸ್ಥೆಯನ್ನೇ ಬದಲಾಯಿಸಿ ದಾರಿದ್ರ್ಯ ನಿರ್ಮೂಲನ ಮಾಡುವುದು ಸರ್ಕಾರದ ಎರಡನೆಯ ಆಯುಧ. ಈ ಬಗ್ಗೆ ಕರಾಧಾನ ಹಾಗೂ ಇತರ ಕ್ರಮಗಳಿಂದ ಶ್ರೀಮಂತರಿಂದ ಬಡವರಿಗೆ ಸಂಪತ್ತು ಮತ್ತು ವರಮಾನಗಳ ಮರುಹಂಚಿಕೆ ಮಾಡುವ ಯೋಜನೆಗೆ ಪ್ರಾಮುಖ್ಯ ನೀಡಲಾಗಿದೆ. ಭೂಹಿಡುವಳಿಯ ಗರಿಷ್ಠ ಪರಿಮಿತಿಯನ್ನು ನಿರ್ಧರಿಸಿ ಅಧಿಕ ಭೂಮಿಯನ್ನು ಹಂಚುವುದು ಒಂದು ಕ್ರಮ. ರಾಜ್ಯಸರ್ಕಾರಗಳು ಭೂ ಸುಧಾರಣಾ ಕಾನೂನನ್ನು ಜಾರಿಗೆ ತಂದು ನಿರ್ದಿಷ್ಟ ಪರಿಮಿತಿಗೆ ಹೆಚ್ಚಿನ ನೆಲವನ್ನು ವಶಕ್ಕೆ ತೆಗೆದುಕೊಂಡು ಅದನ್ನು ಭೂಮಿಯಿಲ್ಲದ ಕೃಷಿ ಕಾರ್ಮಿಕರಿಗೂ ತೀರ ಸಣ್ಣಹಿಡುವಳಿದಾರರಿಗೂ ಹಂಚುವ ಕಾರ್ಯವನ್ನು ಪ್ರಾರಂಭಿಸಿವೆ. ಗೇಣಿದಾರರು ಸಾಗುವಳಿ ಮಾಡುತ್ತಿರುವ ಜಮೀನನ್ನು ವರ್ಗಾಯಿಸುವ ಕ್ರಮವನ್ನೂ ಕೈಗೊಳ್ಳಲಾಗಿದೆ.

	20 ಅಂಶಗಳ ಕಾರ್ಯಕ್ರಮದಲ್ಲಿ ಬಡವರ ಸ್ಥಿತಿಗತಿಗಳನ್ನು ನೇರವಾಗಿ ಉತ್ತಮಗೊಳಿಸುವ ಅಂಶಗಳಿವೆ. ಗ್ರಾಮಪ್ರದೇಶಗಳಲ್ಲಿ ಬಡವರಿಗೆ ನಿವೇಶನಗಳನ್ನು ಹಂಚುವುದು ಮತ್ತು ಮನೆ ಕಟ್ಟಲು ಅವರಿಗೆ ನೆರವು ನೀಡುವುದು, ಬಡ ರೈತರನ್ನೂ ಇತರ ಬಡವರನ್ನೂ ಸಾಲದಿಂದ ವಿಮೋಚನೆಗೊಳಿಸುವುದು, ಜೀತಪದ್ಧತಿಯ ರದ್ದು, ಕೃಷಿ ಕಾರ್ಮಿಕರ ಕೂಲಿ ದರದ ನಿರ್ಧಾರ, ಬಡ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳೇ ಮುಂತಾದವನ್ನೂ ವಿದ್ಯಾರ್ಥಿನಿಲಯಗಳಿಗೆ ಅವಶ್ಯಕ ವಸ್ತುಗಳನ್ನೂ ಯೋಗ್ಯ ಬೆಲೆಗಳಲ್ಲಿ ಒದಗಿಸುವುದು ಮುಂತಾದ ಕಾರ್ಯಕ್ರಮಗಳು ದಾರಿದ್ರ್ಯ ನಿರ್ಮೂಲನ ಮಾಡುವ ಗುರಿ ಹೊಂದಿದೆ.

	ಒಟ್ಟಿನಲ್ಲಿ ಭಾರತದಲ್ಲಿ ಸರ್ಕಾರ ದಾರಿದ್ರ್ಯದ ಮೇಲೆ ದೊಡ್ಡ ಸಮರವನ್ನೇ ಹೂಡಿದೆ. ಆದರೆ ದಾರಿದ್ರ್ಯ ನಿರ್ಮೂಲ ಯೋಜನೆ ಎಷ್ಟರ ಮಟ್ಟಿಗೆ ಫಲಕಾರಿಯಾಗುತ್ತದೆ ಎಂಬುದು ಈ ಕ್ರಮಗಳು ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ತರಲ್ಪಡುವುವು ಹಾಗೂ ಇದರಿಂದ ನಿಜವಾಗಿಯೂ ಬಡವರೆನಿಸುವವರಿಗೆ ಎಷ್ಟು ಪ್ರಯೋಜನ ತಲುಪುತ್ತದೆ ಎಂಬುದನ್ನು ಅವಲಂಬಿಸಿದೆ. ಇಲ್ಲಿಯವರೆಗೆ ದಾರಿದ್ರ್ಯ ನಿರ್ಮೂಲನ ಮಾಡಲು ಕೈಗೊಳ್ಳಲಾದ ಹಾಗೂ ಕೈಗೊಳ್ಳಲಿರುವ ಕ್ರಮಗಳು ಬಡತನಕ್ಕೆ ಕಾರಣವಾದ ಕೆಲವು ಆರ್ಥಿಕ ಮತ್ತು ಸಾಮಾಜಿಕ ಬಲಗಳನ್ನು ಸಡಿಲಗೊಳಿಸುವಂಥವು ಹಾಗೂ ಬಡವರಿಗೆ ಆರ್ಥಿಕ ಸಹಾಯವನ್ನು ನೀಡುವಂಥವು. ದಾರಿದ್ರ್ಯ ಪೂರ್ಣವಾಗಿ ನಿರ್ಮೂಲನವಾಗಬೇಕಾದರೆ ಪ್ರತಿ ಬಡವನಲ್ಲೂ ಮಾನಸಿಕ ಕ್ರಾಂತಿ ಉಂಟಾಗಬೇಕು. ತಾನು ತನ್ನ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಬೇಕೆಂಬ ಬೃಹದಾಕಾಂಕ್ಷೆ ಹುಟ್ಟಬೇಕು; ಹಾಗೂ ಅದಕ್ಕೆ ಯೋಗ್ಯವಾದ ಪ್ರಯತ್ನವನ್ನು ಕೈಗೊಳ್ಳುವುದಕ್ಕೆ ಪ್ರೇರಣೆಯಾಗಬೇಕು.
(ಎ.ಬಿ.ಎ.; ಎಚ್.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ